Breaking News
Home / Breaking News / ಉಡುಪಿ; ಕಸ, ಮಲ, ಇಲಿ ತುಂಬಿದ ಕೊಳಕು ಮನೆಯಲ್ಲಿ ಒಂಟಿ ಮಗುವನ್ನು ಬಿಟ್ಟು ಹೋದ ಬ್ರಹ್ಮಾವರದ ದಂಪತಿ ಅಮೇರಿಕಾದಲ್ಲಿ ಅರೆಸ್ಟ್!

ಉಡುಪಿ; ಕಸ, ಮಲ, ಇಲಿ ತುಂಬಿದ ಕೊಳಕು ಮನೆಯಲ್ಲಿ ಒಂಟಿ ಮಗುವನ್ನು ಬಿಟ್ಟು ಹೋದ ಬ್ರಹ್ಮಾವರದ ದಂಪತಿ ಅಮೇರಿಕಾದಲ್ಲಿ ಅರೆಸ್ಟ್!

ಆ ಮನೆಗೆ ಕಾಲಿಡುತ್ತಿದ್ದಂತೆ ಮೂಗು ಮುಚ್ಚಿಕೊಂಡರೂ ತಡೆಯಲಾರದಷ್ಟು ವಾಸನೆ, ಗೋಡೆಗಳಲ್ಲಿ ಅಲ್ಲಲ್ಲಿ ಮಲದ ಗುರುತುಗಳು, ಒಂದು ಕಡೆ ಕಸದ ರಾಶಿ, ಕೊಳಕು ಕೊಳಕಾದ ಇಲಿಗಳ ಹಿಂಡು… ಅಬ್ಬಬ್ಬಾ ಅದನ್ನು ಅದ್ಹೇಗೆ ಮನೆ ಎನ್ನಬೇಕೋ? ಅಮೇರಿಕಾದಲ್ಲಿರುವ ಈ ಮನೆಯಲ್ಲಿ ಉಡುಪಿಯ ಬ್ರಹ್ಮಾವರದ ಈ ದಂಪತಿ ತಮ್ಮ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದಾರೆ.

ನ್ಯೂಯಾರ್ಕ್ ನ ಬ್ರೋನ್ಕ್ಸ್ ಸಿಟಿಯಲ್ಲಿ ವಾಸಿಸುತ್ತಿರುವ ವಿಲ್ಫ್ರೆಡ್ ಲೂಯಿಸ್ (59) ಮತ್ತು ಚಾರ್ಲೋಟ್ಟ್ ಲೂಯಿಸ್(48) ದಂಪತಿ ತಮ್ಮ 5 ವರ್ಷದ ಮಗನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋದ ಕಾರಣಕ್ಕೆ ಅಮೇರಿಕಾದ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಫೆಡೆಕ್ಸ್ ಕೊರಿಯರ್ ನ ಡೆಲಿವರಿ ಹುಡುಗ ಈ ಮನೆಗೆ ಡೆಲಿವರಿ ಕೊಡಲು ಬಂದಾಗ ಮನೆ ಬಾಗಿಲು ತೆರೆದ ಬಾಲಕ ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿಸಿದ್ದಾನೆ. ಆಗ ಮನೆಯೊಳಗೆ ಇಣುಕಿದ ಡೆಲಿವರಿ ಹುಡುಗನಿಗೆ ಅಲ್ಲಿ ಇಲಿಗಳ ಹಿಂಡು, ಕೊಳಕು ಕಸದ ರಾಶಿಗಳಿಂದ ತುಂಬಿದ ಮನೆಯಲ್ಲಿ ಒಂಟಿಯಾಗಿದ್ದ  5 ವರ್ಷದ ಮಗುವಿನ ಈ ಚಿಂತಾಜನಕ ಸ್ಥಿತಿಯ ಅರಿವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ದೂರು ಬಂದ ಕೂಡಲೇ ಅಲ್ಲಿನ ಪೊಲೀಸ್ ಪೇದೆಯೊಬ್ಬರು ಮನೆಗೆ ಹೋದಾಗ ಇಲಿ, ಜಿರಲೆ, ಕಸ ಮಾತ್ರವಲ್ಲದೆ, ತಿಗಣೆ ಮತ್ತು ಇತರ ಕ್ರಿಮಿಕೀಟಗಳು, ಮಲದ ರಾಶಿ ತುಂಬಿದ್ದ ಮನೆಯಲ್ಲಿದ್ದ ಬಾಲಕನನ್ನು ಹೊರಗೆ ಕರೆದುಕೊಂಡು ಬಂದು ಪಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ.

 ಬಾಲಕನ ತಾಯಿ ಚಾರ್ಲೋಟ್ಟ್ ಲೂಯಿಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯನ್ನು ಅಲ್ಲಿಯೇ ಬಂಧಿಸಲಾಗಿದೆ ಮತ್ತು ತಂದೆ ವಿಲ್ಫ್ರೆಡ್ ಲೂಯಿಸ್ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಾಗಿದ್ದಾರೆ. ತನ್ನ ಮಗ ತನ್ನನ್ನು ತಾನು ನಿಭಾಯಿಸಲು ಸಮರ್ಥನಾಗಿದ್ದು, ಅದಕ್ಕೆ ನಾವು ಅವನನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದೆವು. ಇನ್ನು ಮುಂದೆ ಇಂತಹ ತಪ್ಪು ನಡೆಯಲು ಬಿಡುವುದಿಲ್ಲ ಎಂದು ತಂದೆ ಪೊಲೀಸರ ಮುಂದೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ದಂಪತಿಗೆ ಇನ್ನೂ ಮೂವರು ಮಕ್ಕಳಿದ್ದು, ಅವರು ಈ ಸಮಯದಲ್ಲಿ ಶಾಲೆಗೆ ಹೋಗಿದ್ದರು ಎನ್ನಲಾಗಿದೆ. ದಂಪತಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಂತಹ ಕೊಳಕು ಮನೆಯಲ್ಲಿಯೇ ಅವರು ತಮ್ಮ ನಾಲ್ಕು ಮಕ್ಕಳನ್ನು ಬೆಳೆಸುತ್ತಿರುವುದಕ್ಕೆ ನೆಟ್ಟಿಗರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ದಂಪತಿ ಬ್ರಹ್ಮಾವರದ ಮಟ್ಪಾಡಿಯವರಾಗಿದ್ದು, ಹಲವು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ ಎಂದು ತಿಳಿದಿ ಬಂದಿದೆ. ಚಾರ್ಲೋಟ್ಟ್ ಲೂಯಿಸ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೆ, ವಿಲ್ಫ್ರೆಡ್ ಲೂಯಿಸ್ ಪ್ರೊಫೆಸರ್ ಆಗಿದ್ದಾರೆ.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money